ವಿರಾಟ
	ಮಹಾಭಾರತದ ಒಂದು ಪಾತ್ರ. ಮತ್ಸ್ಯದೇಶಾಧಿಪತಿ. ಮರುತ್ ಗಣಗಳ ಅಂಶದಿಂದ ಹುಟ್ಟಿದವ. ಈತನಿಗೆ ಇಬ್ಬರು ಪತ್ನಿಯರು. ಹಿರಿಯ ಹೆಂಡತಿ ಸುರಥೆ ಯಲ್ಲಿ ಶ್ವೇತ ಮತ್ತು ಶಂಖರೆಂಬ ಇಬ್ಬರು ಪುತ್ರರನ್ನು ಪಡೆದ. ಕಿರಿಯ ಹೆಂಡತಿ ಸುದೇಷ್ಣೆ. ಇವಳು ಕೇಕಯ ದೇಶಾಧಿಪತಿ ರಥಕಾರನ ಕಿರಿಯ ಹೆಂಡತಿ ಮಾಳವಿಯ ಮಗಳು. ಇವಳ ತಮ್ಮ ಕೀಚಕ ಇವನ ಸೇನಾಪತಿಯಾಗಿದ್ದ. ಕೀಚಕ ಸೈರಂಧ್ರಿಯನ್ನು (ದ್ರೌಪದಿ) ಮೋಹಿಸಿ ವಲಲ (ಭೀಮ)ನಿಂದ ಹತನಾದ. ವಿರಾಟ ಸುದೇಷ್ಣೆಯಲ್ಲಿ ಉತ್ತರಕುಮಾರ ಮತ್ತು ಉತ್ತರೆ ಎಂಬ ಇಬ್ಬರು ಮಕ್ಕಳನ್ನು ಪಡೆದ. ಉತ್ತರ ಗೋಗ್ರಹಣ ಸಮಯದಲ್ಲಿ ಬೃಹನ್ನಳೆಯನ್ನು (ಅರ್ಜುನ) ಸಾರಥಿಯಾಗಿ ನೇಮಿಸಿಕೊಂಡು, ಯುದ್ಧಕ್ಕೆ ಹೊರಟು ಕೌರವ ಸೇನೆಯನ್ನು ಕಂಡು ಹೆದರಿ ಉತ್ತರಕುಮಾರ ಓಡಿಹೋದ. ಉತ್ತರೆಯು ಅರ್ಜುನ-ಸುಭದ್ರೆಯರ ಮಗ ಅಭಿಮನ್ಯುವಿನ ಹೆಂಡತಿಯಾದಳು. 

	ವಿರಾಟ ಪರಾಕ್ರಮಶಾಲಿ, ಮಹಾರಥ, ಪಾಂಡವರ ಪರವಾಗಿ ಹೋರಾಡಿದವ. ಪಾಂಡವರು ಹನ್ನೆರಡು ವರ್ಷ ವನವಾಸಮಾಡಿ ಒಂದು ವರ್ಷದ ಅಜ್ಞಾತವಾಸಕ್ಕಾಗಿ ವಿರಾಟನಲ್ಲಿಗೆ ಬಂದು ಸೇರುತ್ತಾರೆ. ಆಗ ನಡೆದ ದಕ್ಷಿಣ ಗೋಗ್ರಹಣದಲ್ಲಿ ತ್ರಿಗರ್ತ ದೇಶಾಧಿಪತಿಯಾದ ಸುಶರ್ಮನೊಂದಿಗೆ ಯುದ್ಧಮಾಡಿ ಸೆರೆಸಿಕ್ಕಿದಾಗ ಯುಧಿüಷ್ಠಿರನ ಮಾತಿನ ಮೇರೆಗೆ ಭೀಮ ಇವನನ್ನು ಬಂಧಮುಕ್ತನನ್ನಾಗಿ ಮಾಡಿದ. ಈತ ಕಂಕನೊಂದಿಗೆ (ಯುಧಿಷ್ಠಿರ) ಪಗಡೆಯಾಡುತ್ತಿದ್ದಾಗ ಉತ್ತರ ಗೋಗ್ರಹಣದ ಸಮಯದಲ್ಲಿ ಬೃಹನ್ನಳೆಯೇ ಕೌರವನನ್ನು ಗೆದ್ದನೆಂದು ಹೇಳಿದ ಕಂಕಭಟ್ಟನ ಮಾತಿಗೆ ಮುನಿದು ಆತನ ಹಣೆಗೆ ದಾಳದಿಂದ ಹೊಡೆದ. ಅನಂತರ ಪಾಂಡವರೇ ತನ್ನಲ್ಲಿ ವೇಷಮರೆಸಿಕೊಂಡು ಇದ್ದಾರೆ ಎಂಬ ವಿಷಯ ತಿಳಿದೊಡನೆ ಹೆದರಿ ಮಗಳು ಉತ್ತರೆಯನ್ನು ಅಭಿಮನ್ಯುವಿಗೆ ಕೊಟ್ಟು ಸಂಬಂಧ ಬೆಳೆಸಿದ. ಕುರುಕ್ಷೇತ್ರದ ಹದಿನಾಲ್ಕ ನೆಯ ದಿನದ ರಾತ್ರಿಯುದ್ಧದಲ್ಲಿ ದ್ರೋಣನಿಂದ ಮಡಿದ.    
 (ಆರ್.ಎಸ್.ಜೆ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ